ಪಿಕರಿಂಗ್, ಡಬ್ಲ್ಯೂ ಎಚ್
1858-1938. ಅಮೆರಿಕ ದೇಶದ ಖಗೋಳ ಶಾಸ್ತ್ರಜ್ಞ. 1858 ಫೆಬ್ರುವರಿ 15 ರಂದು ಜನನ. ಮಸಾಚುಸೆಟ್ಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ಮುಗಿಸಿ (1887) ಅಲ್ಲೇ ಭೌತ ವಿಜ್ಞಾನ ಸಹಾಯಕ ಬೋಧಕನಾಗಿ ನೇಮಕಗೊಂಡ. ಮುಂದೆ ಈತ ಹಾರ್ವರ್ಡ್ ವಿಶ್ವವಿದ್ಯಾಲಯದ ವೇಧ ಶಾಲೆ ಸೇರಿ 1889 ರಲ್ಲಿ ಅಲ್ಲೇ ಉಪಪ್ರಾಧ್ಯಾಪಕನಾದ. ಪಿಕರಿಂಗ್ ಹಲವಾರು ವೇಧ ಶಾಲೆಗಳನ್ನು ಸ್ಥಾಪಿಸಿ ಖ್ಯಾತನಾಗಿದ್ದಾನೆ. ಅವುಗಳ ಪೈಕಿ ಒಂದಾದ ಪೆರುವಿನಲ್ಲಿಯ ಹಾರ್ವರ್ಡ್ ವೇಧ ಶಾಲೆಯ ಅರೆಕಿಪ ಕೇಂದ್ರದಲ್ಲಿ ಪಿಕರಿಂಗ್ ಶನಿಗ್ರಹದ ಒಂಬತ್ತನೆಯ-ಮುಂದೆ ಫೀಬೀ ಎಂದು ಹೆಸರಿಸಲ್ಪಟ್ಟ-ಉಪಗ್ರಹವನ್ನು ಛಾಯಾಗ್ರಹಣ ತಂತ್ರದಿಂದ ಆವಿಷ್ಕರಿಸಿದ. (1898). ವಕ್ರ ಚಲನೆಯನ್ನು (ರಿಟ್ರೊಗ್ರೇಡ್ ಮೋಷನ್) ಪಡೆದಿರುವ ಈ ಉಪಗ್ರಹದ ನೇರ ವೀಕ್ಷಣೆಯನ್ನು 1904 ಸೆಪ್ಟೆಂಬರ್ 12ರಂದು ಯೆಕ್ರ್ಸ್ ವೇಧಶಾಲೆಯಿಂದ ಇ. ಇ. ಬರ್ನಾಡ್ ಮಾಡಿದ ಮತ್ತು ಅದರ ಚಲನೆಯನ್ನು ಅಭ್ಯಸಿಸಿ ಫೀಬೀಯ ಇರುವಿಕೆಯನ್ನು ನಿರೂಪಿಸಿದ. 1919 ರಲ್ಲಿ ಪಿಕರಿಂಗ್ ಸ್ವತಂತ್ರವಾಗಿ ಪರ್ಸಿವಲ್ ಲೋವೆಲ್‍ನಂತೆಯೇ, ನೆಪ್ಚೂನಿನ ಆಚೆಯ ಗ್ರಹವೊಂದರ ಸಾಧ್ಯತೆಯನ್ನು ಪ್ರತಿಪಾದಿಸಿದ. ಪ್ಲೂಟೋ ಎಂದು ಕರೆಯಲ್ಪಡುವ ಈ ಗ್ರಹ ಅರಿಜೋನದ ಫ್ಲಾಗ್‍ಸ್ಟಾಪಿನಲ್ಲಿ ಪಿಕರಿಂಗನಿಂದ ಸ್ಥಾಪಿತವಾದ ಲೋವೆಲ್ ವೇದಶಾಲೆಯಲ್ಲಿ ಸಿ. ಡಬ್ಲ್ಯೂ. ಟಾಮ್‍ಬಾಗ್ ಎಂಬಾತನಿಂದ 1930 ಜನವರಿ 23 ರಂದು ಛಾಯಾಗ್ರಹಣ ತಂತ್ರದಿಂದ ಆವಿಷ್ಕರಿಸಲ್ಪಟ್ಟಿತು. ಪಿಕರಿಂಗ್ ಚಂದ್ರ ಮತ್ತು ಮಂಗಳಾದಿ ಗ್ರಹಗಳ ವೀಕ್ಷಣಾಧ್ಯಯನವನ್ನೂ ಮಾಡಿದ. 1938 ಜನವರಿ 21 ರಂದು ಇಂಡೀಸಿನ ಜಮೈಕಾದಲ್ಲಿ ಮರಣ ಹೊಂದಿದ. 
	(ಎಸ್.ಎಸ್.ಆರ್.ಐ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ